ಅಹಾರ, ಆರೋಗ್ಯ, ಸಂಸ್ಕೃತಿ
3 mins readOctober 31, 2022
ahara
food
arogya
health
sanskriti
cluture
ಮಾನವ ಜನ್ಮ ದೊಡ್ಡದು, ಇದ ಹಾಳು ಮಾಡಬೇಡಿ ಹುಚ್ಚಪ್ಪಗಳಿರಾ ಎಂದು ದಾಸರು ಹಾಡಿ ಹೇಳಿದ ಮಾತು ಇಂದಿಗೂ ಪ್ರಸ್ತುತ. ಬದುಕಿರುವುದೇ ೭೦-೮೦ ವರ್ಷ, ಅದರಲ್ಲಿ ಅನಾರೋಗ್ಯದಿಂದ ಒಂದಿಷ್ಟು ಕಾಲ ಹಾಳು ಮಾಡುವುದು ಶುದ‍್ಧ ಮೂರ್ಖತನ. ಈ ಲೇಖನ ನನ್ನ ಪರಿಮಿತ ಜ್ಜಾನ ಮತ್ತು ಅನುಭವಗಳ ಸಂಗ್ರಹ. ತಪ್ಪೆನಿಸಿದರೆ ತಿದ್ದಿ.
ಮೊನ್ನೆ-ಮೊನ್ನೆ ನನ್ನ ತಮ್ಮನೊಡನೆ ಅನಿಯಮಿತವಾಗಿ ತಿನ್ನುತ್ತಾ ಇರುವುದರಿಂದ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸುತ್ತಿದ್ದೆ. ಅವನಿಗೆ ಈ ಸಲ ಜೀರ್ಣಾಂಗವ್ಯೂಹದ ಬಗ್ಗೆ ಪಾಠ ಇರುವುದರಿಂದ ಹುರುಪಿನಿಂದಲೆ ಚರ್ಚಿಸಿದ. ಯಾವಾಗಲೂ ತಿನ್ನುತ್ತ ಇದ್ದರೆ ಏನೂ ಸಮಸ್ಯೆ ಇಲ್ಲ ಎಂಬುದು ಅವನ ವಾದ. ಹಾಗೆ ತಿಂದರೆ ಅಜೀರ್ಣ ಆಗುವುದು ಎಂಬುದು ನನ್ನ ವಾದ.
ನಾವು ಶಾರೀರಿಕ ಶ್ರಮಪಟ್ಟಾಗ ಮತ್ತು ಕಾಲಕಾಲಕ್ಕೆ (ದಿನದ ಊಟದ ಸಮಯಕ್ಕೆ) ಶರೀರದಲ್ಲಿ ಹಸಿವಿನ ಸಂಕೇತ (ಘ್ರೆಲಿನ್) ಹರಡುತ್ತದೆ. ಇದರಿಂದ ಜಠರದಲ್ಲಿ ಆಮ್ಲ ಸ್ರವಿಕೆಯಾಗುತ್ತದೆ. ಆಗ ಮಾತ್ರ ಆಹಾರ ತಿನ್ನಬೇಕು, ತಿಂದ ಆಹಾರ ಜಠರದಲ್ಲಿ ಹೋಗುತ್ತದೆ. ಅಲ್ಲಿ ಅದು ಆಮ್ಲ ಮತ್ತು ಪೆಪ್ಸಿನ್ (ಪ್ರೋಟೀನ್ ಜೀರ್ಣವಾಗಲು ಬೇಕು) ಜೊತೆ ಬೆರೆತು ಸಣ್ಣ ಕರುಳಿಗೆ ನಿಧಾನವಾಗಿ ಹೋಗುವಾಗ ಅದರೊಡನೆ ಪಿತ್ತರಸ (ಕೊಬ್ಬು ಜೀರ್ಣವಾಗಲು ಬೇಕು) ಬೆರೆಯುತ್ತದೆ. ಕರುಳು ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿ ಉಳಿದಿದ್ದನ್ನು ಹೊರಹಾಕುತ್ತದೆ.
ಆಹಾರದಲ್ಲಿ ಆಮ್ಲ ಸೇರಿದರೆ ವಿಘಟನೆ ಸರಿಯಾಗಿ ಆಗುತ್ತದೆ. ಹೀಗಾಗಿ ಜಠರಾಮ್ಲ ಸರಿಯಾಗಿ ನಾವು ತಿಂದ ಆಹಾರದೊಂದಿಗೆ ಬೆರೆಯಲೇ ಬೇಕು. ಅನಿಯಮಿತವಾಗಿ ತಿನ್ನುವುದರಿಂದ ಎರಡು ಸಮಸ್ಯೆಗಳು ಉಂಟಾಗಬಹುದು.
- ಅಜೀರ್ಣ - ತಿಂದ ಆಹಾರದೊಂದಿಗೆ ಆಮ್ಲ ಸರಿಯಾದ ಪ್ರಮಾಣದಲ್ಲಿ ಸೇರದೆ ಇದ್ದರೆ (ಜಾಸ್ತಿ ತಿಂದಾಗ) ಅದು ಸರಿಯಾಗಿ ಜೀರ್ಣವಾಗದು.
- ಕರುಳಿನ ಭಿತ್ತಿನಾಶ - ಅನಿಯಮಿತವಾಗಿ ಜಠರಾಮ್ಲ ಸ್ರವಿಕೆಯಾದರೆ ಅದು ತನ್ನ ಪೂರ್ಣ ಸಾರತೆಯೊಂದಿಗೆ ಕರುಳನ್ನು ಸೇರಿ ಕರುಳಿನ ಭಿತ್ತಿಯನ್ನು ಸುಡುತ್ತದೆ.
ಈ ರೀತಿ ಆಮ್ಲ ಸೇರಿದ ಆಹಾರ ಸಣ್ಣ ಕರುಳಿಗೆ ನಿಧಾನವಾಗಿ ಹರಿಯುತ್ತದೆ. ಜಠರದ ಕೊನೆಯಲ್ಲಿರುವ ಸ್ನಾಯುಗಳ ಸಂಕೋಚನ-ವಿಕಸನ ಈ ಹರಿವನ್ನು ನಿಯಂತ್ರಿಸುತ್ತವೆ. ಈಗ ಒಂದು ಪ್ರಶ್ನೆ ಬಂತು. ನಾವು ಮಲಗುವ ಪದ್ಧತಿ ಈ ಹರಿವಿನ ಮೇಲೆ ಪರಿಣಾಮ ಬೀರುವುದೆ? ಅದಕ್ಕೆ ಉತ್ತರ ದೇಹದಲ್ಲಿ ಜಠರ ಮತ್ತು ಕರುಳಿನ ಸ್ಥಾನಗಳು ನೀಡುತ್ತವೆ. ಕೆಳಗಿನ ಚಿತ್ರ ನೋಡಿ.
ಸರಿಯಾಗಿ ಜೀರ್ಣವಾಗಲು ಎಡ / ಬಲ ಮಗ್ಗುಲಲ್ಲಿ ಮಲಗಬೇಕು. ಬೋರಲು ಮಲಗುವುದರಿಂದ ಜಠರದ ಮೇಲೆ ಒತ್ತಡ ಹೆಚ್ಚಿ ಅಜೀರ್ಣವಾಗುತ್ತದೆ. ಅದಕ್ಕೆ ಊಟವಾದ ಮೇಲೆ ಒಂದಿಷ್ಟು ಹೊತ್ತು ಓಡಾಡದಿರಲು ಹೇಳುತ್ತಾರೆ.
ಈಗ ಶಾಲೆಗಳಲ್ಲಿ ಇವುಗಳ ಪೂರ್ಣ ಚರ್ಚೆ ಆಗುವುದಿಲ್ಲ. ಶಾಸ್ತ್ರಗಳ ಪಾಲನೆಯಂತೂ ಬಹುತೇಕ ಜನರಲ್ಲಿ ದೂರದ ಮಾತು. ಎಷ್ಟೋ ಜನರಿಗೆ ತಮ್ಮ ಆರೊಗ್ಯ ಗತಿಗೆಟ್ಟಿರುವುದೂ ತಿಳಿದಿರುವುದಿಲ್ಲ. ಹರಿಯ ಅನುಗ್ರಹದಿಂದ ನಾನು ಶಾಸ್ತ್ರಗಳು ಹೇಳಿದಂತೆ ಇರುವ ವಿಚಾರ ಬಂತು. ಇಲ್ಲಿಯವರೆಗೆ ಅನುಷ್ಠಾನಗೈದ ವ್ರತ ಮತ್ತು ದಿನಚರಿಯ ಬಗ್ಗೆ ಕೆಳಗೆ ಬರೆದಿದ್ದೇನೆ
ಇಲ್ಲಿ ಬರೆದಿರುವ ಪ್ರಯೋಜನಗಳು ಅನುಭವಕ್ಕೆ ಬಂದಿದ್ದು ಮಾತ್ರ, ಒಟ್ಟಾರೆಯಾಗಿ ನನ್ನ ಆರೊಗ್ಯದ ಮಟ್ಟ ತುಂಬಾ ಸುಧಾರಿಸಿದೆ.
ದಶಮಿ - ಏಕಾದಶಿ - ದ್ವಾದಶಿ:
ಇವತ್ತು ಬೆಳಿಗ್ಗೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಉಪವಾಸ ಮಾಡಿಸುವ ಆಪ್ಪ್ (ಇಂಟರ್ಮಿಟೆಂಟ್ ಫಾಸ್ಟಿಂಗ್) ನೋಡಿದೆ. ಜನರು ಸುತ್ತಿ ಬಳಸಿ ಅಲ್ಲಿಯೇ ಬರುವುದ ನೋಡಿ ನಗು ಬಂತು. (ಇದು ನಮ್ಮ ನೆಲದ ಜ್ಞಾನಕ್ಕೆ ನಾವು ಬಗೆಯುತ್ತಿರುವ ಕೇಡಲ್ಲವೆ?)
ದಶಮಿ ಮತ್ತು ದ್ವಾದಶಿ - ಒಂದು ಹೊತ್ತು ಮಾತ್ರ ಊಟ, ರಾತ್ರಿ ಅಲ್ಪಾಹಾರ, ಊಟ ಇಲ್ಲ.
ಏಕಾದಶಿ - ನಿರ್ಜಲ ಉಪವಾಸ
ಪ್ರಯೋಜನಗಳು:
ಜ್ಞಾನೇಂದ್ರಿಯಗಳು ಸುಧಾರಿಸುತ್ತವೆ, ಕೊಬ್ಬು ಕರಗುತ್ತದೆ.
ಈ ಮೂರು ದಿನಗಳೇ ಏಕೆ ಎನ್ನುವ ಪ್ರಶ್ನೆ ನನಗಿನ್ನೂ ಇದೆ.
ಚಾತುರ್ಮಾಸ:
ಚಾತುರ್ಮಾಸದ ಕೊನೆಯಾಗುತ್ತ ಬರುತ್ತಿದೆ. ಈ ಸಲ ಹರಿಯ ಅನುಗ್ರಹದಿಂದ ವ್ರತ ಮಾಡಲು ಮನಸ್ಸು ಬಂತು, ಮಾಡಲು ಅನುಕೂಲವೂ ಇತ್ತು (ಅಮ್ಮನಿಗೆ ವಿಶೇಷ ಕೃತಜ್ಜತೆಗಳು). ಚಾತುರ್ಮಾಸದ ಮೊದಲ ತಿಂಗಳು (ಶಾಕವೃತ) ಕಾಯಿ-ಪಲ್ಯಗಳನ್ನು, ಎರಡನೆ ತಿಂಗಳು (ದಧಿವೃತ) ಮೊಸರನ್ನು, ಮೂರನೆ ತಿಂಗಳು (ಕ್ಷೀರವೃತ) ಹಾಲನ್ನು, ನಾಲ್ಕನೆ ತಿಂಗಳು (ದ್ವಿದಳವೃತ) ದ್ವಿದಳ ಧಾನ‍್ಯ ಮತ್ತು ಬಹುಬೀಜದ ಶಾಕಗಳನ್ನು ವರ್ಜಿಸಬೇಕು.
ಶಾಕವೃತದಲ್ಲಿ ಟೆಂಗು, ಮಾವು, ನೆಲ್ಲಿ, ಮೆಣಸು, ಜೀರಿಗೆ ಬಿಟ್ಟರೆ ಯಾವ ಹಣ್ಣು-ಕಾಯಿ-ಪಲ್ಯ-ತೊಗಟೆ-ಬೇರುಗಳನ್ನು ತಿನ್ನಬಾರದು.
ದ್ವಿದಳವೃತದಲ್ಲಿ ದ್ವಿದಳ ಧಾನ‍್ಯ, ಬಹುಬೀಜ ಇರುವ ಹಣ್ಣು-ಕಾಯಿ-ಪಲ್ಯ-ತೊಗಟೆ-ಬೇರುಗಳನ್ನು ತಿನ್ನಬಾರದು. ಟೆಂಗು, ಮಾವು, ನೆಲ್ಲಿ, ಮೆಣಸು, ಜೀರಿಗೆ, ರಾಜಗೀರಿ, ಶಾವೆ, ಬಟಾಟಿ, ಸುವರ್ಣಗಡ್ಡೆ, ಎಳ್ಳು ಇವನ್ನು ತಿನ್ನಬಹುದು.
ಪ್ರಯೋಜನಗಳು:
- ಪೂರ್ಣ ಪ್ರಯೋಜನಗಳು ನನಗೆ ಇನ್ನೂ ತಿಳಿದಿಲ್ಲ. ಆದರೆ ಮನೆಯಲ್ಲಿ ಎಲ್ಲರಿಗೂ ಈಗ ಹವಾಮಾನ ಬದಲಾವಣೆಯಿಂದ ನೆಗಡಿ ಕೆಮ್ಮು ಬಂದು ಹೊಯಿತು. ನಾನು ಪ್ರತಿ ವರ್ಷ ಇದನ್ನು ಅನುಭವಿಸುವವನು ಈ ಸಲ ಆರಾಮವಾಗಿದ್ದೇನೆ.
- (ಕೆಂಪು) ಮೆಣಸಿನ ಕಾಯಿಯ ಬದಲು ಕಾಳುಮೆಣಸು ಬಳಸುವುದರಿಂದ ಮೂಗು ಸೋರುವುದಿಲ್ಲ.
ಕಾರ್ತಿಕ ಸ್ನಾನ:
ಅಶ್ವೀನ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಸೂರ್ಯೋದಯಕ್ಕೂ ಮೊದಲೇ (ತಣ್ಣೀರು) ಸ್ನಾನ ಮಾಡುವುದು.
ಪ್ರಯೋಜನಗಳು:
ಇದನ್ನು ಪ್ರಾರಂಭದಿಂದ ಮಾಡಿದರೆ ದೇಹ ಚಳಿಗೆ ಒಗ್ಗಿಕೊಳ್ಳುತ್ತದೆ. ಮೈ ಪೂರ್ತಿ ದಿನ ಬೆಚ್ಚಗಿರುತ್ತದೆ. ನಡುವೆ ಶುರು ಮಾಡಿದರೆ ಸ್ವಲ್ಪ ಕಷ್ಟವಾಗಬಹುದು.
ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಎಳ್ಳುಬೆಲ್ಲ ತಿಂದರೆ ದಿನಪೂರ್ತಿ ಮೈ ಬೆಚ್ಚಗಿರುತ್ತದೆ.
ನಿಯಮಿತವಾದ ಊಟ:
ಮಧ್ವಾಚಾರ್ಯರು ತಮ್ಮ ಸದಾಚಾರ ಸ್ಮೃತಿಯಲ್ಲಿ (ಆನಲೈನಲ್ಲಿ ಲಭ್ಯವಿದೆ ಓದಿ) ತಿಳಿಸುವಂತೆ ದಿನಕ್ಕೆರಡು ಬಾರಿ ಮಾತ್ರ ಊಟ ಮತ್ತು ಅವರು ಹೇಳಿದ ದಿನಚರಿ, (ಶಾಸ್ತ್ರಗಳು, ಊಟವಾದ ನಂತರ ಎಷ್ಟು ಸಲ ಬಾಯಿ ಮುಕ್ಕಳಿಸುವುದು (೧೬) ಎಂದು ಸಹ ವಿಧಿಸಿವೆ)
ನಿಧಾನವಾಗಿ ಅಗಿದು ತಿನ್ನುವುದು:
ಗಡಿಬಿಡಿಯಿಂದ ತಿಂದರೆ ತೃಪ್ತಿಯೂ ಇರುವುದಿಲ್ಲ, ಶಕ್ತಿಯೂ ದೊರೆಯುವುದಿಲ್ಲ. ಊಟ ಕಡಿಮೆ ಎಂದರೆ ಅರ್ಧಗಂಟೆ ಮಾಡಬೇಕು ಆಗ ಜಾಸ್ತಿ ತಿನ್ನುವುದು ಇಲ್ಲ, ತೃಪ್ತಿಯೂ ಇರುತ್ತದೆ.