ಮೂರು ನಾಮಗಳ ಧರಿಸಿದ ಕಾರಣವೇನು
1 min readOctober 02, 2022
mooru
naamagala
kaaranavenu
gopaladasaru
೩ನೇ ಪದ್ಯದ ಸೌಂದರ್ಯ ನೋಡಿ ಬೇರೆ ಕಡೆ ಸಿಕ್ಕರೂ ಇಲ್ಲಿ ನಕಲು ಮಾಡಿದ್ದೇನೆ.
ಮೂರು ನಾಮಗಳ ಧರಿಸಿದ ಕಾರಣವೇನು |
ಸಾರಿ ಪೇಳೆಲೋ ಈಗಲೇ ||ಪ||
ಶ್ರೀ ರಮಾಪತೇ ಶ್ರೀನಿವಾಸ ವೇಂಕಟರಮಣ |
ಯಾರು ಇಟ್ಟರೋ ನಿನಗೇ ಮೂರು ನಾಮಗಳ ||ಅಪ||
ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು |
ಶುದ್ಧ ಪಾದಕೆ ಎರಗಿ ಕರವ ಮುಗಿದು ||
ಎದ್ದು ನೋಡಲು ನಿನ್ನ ಫಣಿಯೊಳೀಪರಿ ಇರಲು |
ಮಧ್ವ ಮತದ ದೈವವೆಂದು ನಿನ್ನ ಕರೆಯುವರೆ ||೧||
ಸಾಲದೇ ನಿನ್ನ ಸೌಂದರ್ಯಕ್ಕೆ ಒಂದು ತಿಲಕ |
ಪಾಲ ಸಾಗರಶಾಯಿ ಚೆಲುವ ಮೂರುತಿ ||
ಕಾಲಕಾಲಕೆ ಬರುವ ಭಕುತ ಜನಗಳ ವೃಂದ ||
ದೃಷ್ಟಿ ತಾಕುವುದೆಂಬ ತೋರುವ ಬಗೆಯೋ ||೨||
ಮೂರು ಲೋಕಗಳಿಹವು ಮೂರು ರೂಪ ನಾನು |
ಮೂರು ಮಾಳ್ಪೆನು ಜಗವ ಮೂರು ಗುಣದಿ ||
ಮೂರು ತಾಪವ ಗೆದ್ದು ಮಾರ್ಗದಿ ಭಜಿಸೆ |
ಪಾರು ಮಾಡುವೆನೆಂದು ತೋರುವ ಬಗೆಯೋ ||೩||
ಮೂರೆರಡು ಎರಡೊಂದು ಇಂದ್ರಿಯ ವರ್ಜಿಸಿ |
ತೋರುವನು ನಿಜರೂಪ ಭಕ್ತನೆಂದು ||
ಸಾರುತಿದ್ದರೂ ವಾಯು ಅರಿಯದೆ ಭಜಿಪಗೆ |
ಮೂರು ನಾಮಗಳೇ ಗತಿ ಎನ್ನುವ ಬಗೆಯೋ ||೪||
ಶ್ರೀಲೋಲ ಕೃಷ್ಣ ಗೋಪಾಲ ವಿಠಲ |
ನಿನ್ನ ಈ ಬಗೆಯ ಲೀಲೆಗಳ ಅರಿವರ‍್ಯಾರೋ ||
ವ್ಯಾಳ ಶಯನ ವೆಂಕಟೇಶನೇ ಎನ್ನ ಮನಕೆ |
ಕಾಲಕಾಲಕೆ ನಿನ್ನ ಲೀಲೆಗಳ ತೋರೋ ||೫||